Saturday, June 30, 2012

ಎರಡು ಪತ್ರಗಳು (ಮೊದಲ ಪತ್ರ)

ಶನಿವಾರದ ದಿನ, ಆರಾಮವಾಗಿ ಹನ್ನೆರಡು ಘಂಟೆಗೆ ಎದ್ದಿದ್ದೆ. ನಿನ್ನೆ ರಾತ್ರಿಯ ನಶೆ ಇನ್ನೂ ಪೂರ್ತಿಯಾಗಿ ಇಳಿದಿರಲಿಲ್ಲ. ಅಡಿಗೆ ಮನೆಯಲ್ಲಿ ಉಳಿದಿದ್ದ ಅರೆ ಬರೆ ತಿಂಡಿಯನ್ನು ತಿಂದು, ಸ್ವಲ್ಪ ನಿಂಬೆ ಶರಬತ್ತು ಕುಡಿಯುತ್ತ ಕುಳಿತ್ತಿದ್ದೆ. ಬೇಗ ನಶೆ ಇಳಿಸದಿದ್ದರೆ ಇವತ್ತಿನ ದಿನವೆಲ್ಲ ಹಾಳಾಗಿ ಹೋಗುವುದು ಖಂಡಿತ. ಕುಡಿಯುವಾಗೆಲ್ಲ ತಪ್ಪಿ ಸಹ ನಾಳೆಯ ಚಿಂತೆ ಬರುವುದಿಲ್ಲ, ಈಗ ಅನುಭವಿಸಬೇಕು. ಮಧ್ಯಾಹ್ನದ ಊಟಕ್ಕೆ ದೀಪಕ್ ಜೊತೆ ಹೊರಗಡೆ ಬೇರೆ ಹೋಗಬೇಕು. ಯಾಕೋ ದೀಪಕ್ ಇತ್ತೀಚಿಗೆ ನಮ್ಮನ್ನೆಲ್ಲ ಆದಷ್ಟು ದೂರ ಇಡುತ್ತ ಇದ್ದಾನೆ, ನಿನ್ನೆ ರಾತ್ರಿ ಸಹ ಪಾರ್ಟಿಗೆ ಬಂದಿರಲಿಲ್ಲ, ಏನೆಂದು ಸರಿಯಾಗಿ ವಿಚಾರಿಸಬೇಕು. ನಿಂಬೆ ಪಾನಕ ಕುಡಿಯುತ್ತ ಟೀವಿ ಆನ್ ಮಾಡಿದೆ, ಸೀದಾ ವಾರ್ತೆಗಳ ಚಾನೆಲ್ ಗೆ ಹೋಗಿತ್ತು. ಹಾಗೆಯೆ ಇಟ್ಟೆ, ಇತ್ತೀಚಿಗೆ ಮಾಮೂಲಿ ಮನರಂಜನ ಚಾನೆಲ್ ಗಳಿಗಿಂತ ಈ ವಾರ್ತೆಗಳಲ್ಲೇ ಜಾಸ್ತಿ ಮನರಂಜನೆ ಸಿಗುತ್ತಿತ್ತು.

ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬಿಸಿ ಬಿಸಿ ಸುದ್ದಿ ಕೆಳಗಡೆ ಮಿನುಗುತ್ತಿತ್ತು. ರಾಜ್ಯದ ಮಂತ್ರಿಯೋರ್ವರ ಬರ್ಬರ ಹತ್ಯೆ, ಇನ್ನಿಬ್ಬರಿಗೆ ಗಂಬೀರ ಪ್ರಮಾಣದ ಗಾಯ. ಆರೋಪಿ ದೀಪಕ್ ಸ್ಥಳದಲ್ಲೇ ಆತ್ಮಹತ್ಯೆ. ಒಂದು ಕ್ಷಣ ನಮ್ಮ ದೀಪಕ್ ಇರಬಹುದೇ ಅನಿಸಿತು. ಮತ್ತೆ ಅಂದುಕೊಂಡೆ, ಕೊಲೆಯಾದರೂ ಮಾಡಿಯಾನು, ಆತ್ಮಹತ್ಯೆಯಂತ ಕೆಲಸ ಖಂಡಿತಾ ಮಾಡಲ್ಲ ಅಂತ. ಕೆಲವೇ ಹೊತ್ತಿನಲ್ಲಿ ಆರೋಪಿಯ ಚಿತ್ರವೂ ಪ್ರಕಟವಾಯಿತು. ನನ್ನ ನಶೆಯಲ್ಲ ಒಮ್ಮೇಲೆ ಇಳಿಯಿತು. ದೀಪಕ್ ರಕ್ತದ ಮಡುವಲ್ಲಿ ಬಿದ್ದಿದ್ದ. ನನ್ನ ಕಣ್ಣುಗಳನ್ನೇ ನನಗೆ ನಂಬಲು ಸಾಧ್ಯವಾಗಲಿಲ್ಲ. ಕೂಡಲೇ ದೀಪಕ್ ನ ನಂಬರಿಗೆ ಡಯಲ್ ಮಾಡತೊಡಗಿದೆ. ಆದರೆ ಮರು ಕ್ಷಣದಲ್ಲಿ ಕರೆಯನ್ನು ತುಂಡರಿಸಿದೆ. ನನ್ನಲ್ಲೂ ಭಯ ಮೂಡತೊಡಗಿತ್ತು . ಖಂಡಿತವಾಗಲೂ ಅದು ದೀಪಕ್, ಅವನ ಫೋನ್ ಈವಾಗ ಪೋಲಿಸ್ ವಶದಲ್ಲಿರಬಹುದು, ಸುಮ್ಮನೆ ಯಾಕೆ ಕೋಲು ಕೊಟ್ಟು ಪೆಟ್ಟು ತಿನ್ನುವುದು. ಬೇರೆ ಯಾರನ್ನು ಕೇಳುವುದು ತಿಳಿಯಲಿಲ್ಲ, ನನ್ನಷ್ಟು ದೀಪಕ್ ಗೆ ಯಾರೂ ಪರಿಚಿತರಲ್ಲ. ದೀಪಕ್ ಹೀಗೆ ಮಾಡಿದ ಎಂದರೆ ನನಗೆ ನಂಬಲೇ ಸಾಧ್ಯವಿರಲಿಲ್ಲ. ಮತ್ತೆ ಕಣ್ಣಲ್ಲಿ ಕಣ್ಣಿಟ್ಟು ವಾರ್ತೆ ನೋಡಲು ಆರಂಬಿಸಿದೆ, ಬಹುಶ ನನಗೆ ಬೇಕಾದ ಮಾಹಿತಿ ಎಲ್ಲ ಅಲ್ಲೇ ಸಿಗಬಹುದೇನೋ.


ಬೆಳಿಗ್ಗೆ ಹತ್ತು ಘಂಟೆಯ ಹೊತ್ತಿಗೆ ನಗರದ ಕಾಲೇಜೊಂದರಲ್ಲಿ ಸಮ್ಮೇಳನವನ್ನು ಉದ್ಘಾಟಿಸಲು ಸಚಿವರು ಬಂದಿದ್ದರಂತೆ. ಸಮಾರಂಭವನ್ನು ಉದ್ಘಾಟಿಸುವ ಸಮಯದಲ್ಲೇ ದೀಪಕನ ಕೈಯಿಂದ ಹಾರಿದ ಪಿಸ್ತೂಲಿನ ಗುಂಡು ಸಚಿವರ ಜೀವವನ್ನು ಬಲಿ ತೆಗೆದುಕೊಂಡಿತ್ತು. ದೀಪಕನನ್ನು  ಬಂಧಿಸಲು ಪೊಲೀಸರು ಬರುವ ಮುಂಚೆಯೇ ಇನ್ನು ಎರಡು ಗುಂಡು ಹಾರಿ ಮತ್ತೀರ್ವ ಸ್ಥಳೀಯ ರಾಜಕಾರಿಣಿಗಳನ್ನು ಗಾಯಗೊಳಿಸಿತ್ತು. ಕೊನೆಯಲ್ಲಿ ಹಾರಿದ ಗುಂಡು ದೀಪಕನ ತಲೆಯನ್ನು ಭೇದಿಸಿ ಅವನನ್ನು ನೆಲಕ್ಕೊರಗಿಸಿತ್ತು. ಯಾವ ಕಾರಣಕ್ಕಾಗಿ ದೀಪಕ್ ಅವರ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಎಂದು ಯಾರಿಗೂ ತಿಳಿದಿರಲಿಲ್ಲ. ಕ್ಷಣಗಳಲ್ಲಿ ಪೊಲೀಸರು ಇಡೀ ಸಭಾಸ್ತಾನವನ್ನು ಖಾಲಿ ಮಾಡಿಸಿ ತಮ್ಮ ತನಿಖೆ ಆರಂಭಿಸಿದ್ದರು. ಆದರೆ ಮಾಧ್ಯಮದವರಿಗೆ ಯಾವದೇ ಸುದ್ದಿಯನ್ನು ಒದಗಿಸಿರಲಿಲ್ಲ. ಕೊಲೆಗೊಂಡ ಸಚಿವರು ವರ್ಷಗಳಿಂದ ಸಾಲು ಸಾಲು ಹಗರಣಗಳಲ್ಲಿ ಸಿಲುಕಿಕೊಂಡಿದ್ದರು. ಆದರೆ ನ್ಯಾಯಾಲಯದಲ್ಲಿ ಯಾವ ಅಪರಾಧವೂ ಸಾಬೀತಾಗಿರಲಿಲ್ಲ, ಕೆಲವು ಕೇಸುಗಳು ಇನ್ನೂ ಚಾಲ್ತಿಯಲ್ಲಿದ್ದವು. ವಾರಗಳ ಹಿಂದಷ್ಟೇ ಮತ್ತೊಮ್ಮೆ ಬಹುಕೋಟಿ ಹಗರಣವೊಂದರಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ರೊಚ್ಚಿಗೆದ್ದ ಯುವಕನಿಂದ ಸಚಿವರ ಕೊಲೆಯಾಗಿರಬಹುದೇ ಎಂದು ಕೆಲವರು ಶಂಕಿಸುತ್ತಿದ್ದರು. ಇನ್ನು ಕೆಲವರು ಸಚಿವರ ಉತ್ತಮ ಕಾರ್ಯಗಳನ್ನು ನೋಡಿ ಸಹಿಸಲಾಗದ ವಿರೋಧಿಗಳು ಈ ಯುವಕನನ್ನು ಮುಂದೆ ತಳ್ಳಿ ಕೊಲೆ ನಡಿಸಿದ್ದಾರೆಂದು ಆರೋಪಿಸುತ್ತಿದ್ದರು. ಯಾವುದು ಸತ್ಯವೋ ಯಾವುದು ಸುಳ್ಳೋ ಒಂದೂ ತಿಳಿಯಲಿಲ್ಲ. ಕೆಲ ದಿನಗಳಿಂದ ದೀಪಕ್ ನಮ್ಮಿಂದ ದೂರವಾಗಿ ಇಂತಹ ಕೆಲಸಕ್ಕೆ ಕೈ ಹಾಕಿದ್ದ ಎಂದರೆ ನನಗೆ ಇನ್ನೂ ನಂಬಿಕೆ ಬರಲಿಲ್ಲ. ಕಾರಣವೂ ತಿಳಿಯಲಿಲ್ಲ. ಸಚಿವರ ಭ್ರಷ್ಟಾಚಾರಕ್ಕೂ ಈ ಕೊಲೆಗೂ ಏನೂ ಸಂಬಂಧವಿಲ್ಲವೆಂದು ನನಗೆ ಮನವರಿಕೆಯಿತ್ತು. ಕಳೆದ ತಿಂಗಳಷ್ಟೇ ಭ್ರಷ್ಟಾಚಾರದ ವಿರುಧ್ಧ ನಡೆದ ದೊಡ್ಡ ಮೆರವಣಿಗೆಯ ದಿನ ನಾನೂ ದೀಪಕ ಸೇರಿ ಬಾರೊಂದರಲ್ಲಿ ಕುಡಿಯುತ್ತ ಈ ಸಂಘಟನೆಗಳ ಬಗ್ಗೆ ಜೋಕ್ ಮಾಡುತ್ತಿದ್ದೆವು. ಅಂತಹವನು ಅಷ್ಟು ಬೇಗ ಬದಲಾಗುತ್ತಾನೆ ಅಂದರೆ ನಂಬಲು ಅಸಾಧ್ಯ. ಅದಲ್ಲದೆ ಸಚಿವರ ಬಗ್ಗೆ ಅವನಲ್ಲಿ ಬೇರಾವ ದ್ವೇಷ ಇರುವುದು ನನಗೆ ತಿಳಿಯದ ವಿಚಾರ. ಈ ಹಾಳು ರಾಜಕೀಯ ನಮಗೆ ಹಾಸ್ಯದ ವಿಷಯ ಬಿಟ್ಟರೆ ಅದಕ್ಕಿಂತ ಹೆಚ್ಚಿನದೇನೂ ಆಗಿರಲಿಲ್ಲ.  ಮಾಡಲು, ಅನುಭವಿಸಲು ನಮಗೆ ಬೇರೆಯ ಹಲವಾರು ವಿಷಯಗಳಿದ್ದವು.


ಎಲ್ಲ ವಾರ್ತಾ ಚಾನೆಲ್ ಗಳಲ್ಲು ಅದೇ ಸುದ್ದಿ, ಯಾರಿಗೂ ಸರಿಯಾದ ವಿವರ ತಿಳಿದಿರಲಿಲ್ಲ. ಒಂದಿಬ್ಬರು ಸ್ನೇಹಿತರಿಗೆ ಕರೆ ಮಾಡಿದೆ, ಎಲ್ಲರೂ ನನ್ನನ್ನೇ ಕೇಳುವವರು. ಊಟ ಮಾಡುವ ಮನಸ್ಸಾಗಲಿಲ್ಲ. ಏನಾದರೂ ಹೊಸ ಸುದ್ದಿ ಬರಬಹುದೆಂದು ಟೀವಿಗೆ ಆತು ಕುಳಿತ್ತಿದ್ದೆ. ಇದ್ದಕ್ಕಿದ್ದಂತೆಯೇ ಸುದ್ದಿವಾಚಕರಲ್ಲಿ ಬದಲಾವಣೆಯ ಸಂಚಯ, ಮುಖ ನೋಡಿಯೇ ಮಹತ್ವದ ಸುದ್ದಿ ಎಂದು ಹೇಳಬಹುದಿತ್ತು. ಕಾತರದಿಂದ ನೋಡುತ್ತಾ ಹೋದೆ. 'ಇದೀಗ ಬಂದ ಸುದ್ದಿ. ಸಚಿವರನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ ದೀಪಕ್ ನಮ್ಮ ಚಾನೆಲ್ಲಿಗೆ ಆತ್ಮಹತ್ಯೆಯ ಪತ್ರವೊಂದನ್ನು ಕಳಿಸಿರುತ್ತಾರೆ, ಈ ಪತ್ರವನ್ನು ಎಲ್ಲರ ಮುಂದೆ ಇಡುವುದು ಅವನ ಕೊನೆಯ ಆಶೆ ಕೂಡ ಆಗಿತ್ತು. ಹೀಗಿದೆ  ಆ ಪತ್ರದ ಒಕ್ಕಣೆ'. ಪತ್ರ ಓದಲು ಪ್ರಾರಂಭಿಸಿದೊಡನೆ ಮೂಲೆಯಲ್ಲಿ ದೀಪಕನ ಭಾವಚಿತ್ರವೊಂದು ಮೂಡಿತು.

'ಎಲ್ಲರಿಗೂ ನನ್ನ ಕೊನೆಯ ನಮಸ್ಕಾರಗಳು. ನನ್ನ ಮನಸ್ಸಲ್ಲಿ ನಡೆಯುತ್ತಿರುವ ದ್ವಂದ್ವಗಳನ್ನು ನಿಮ್ಮಲ್ಲಿ ಹೇಗೆ ತೆರೆದಿಡುವುದು ಎಂಬುದು ಸರಿಯಾಗಿ ತೋಚುತ್ತಿಲ್ಲ. ಸಾವಿನ ಬರದ ನಿರೀಕ್ಷೆಯಲ್ಲಿ ಮನಸ್ಸು ಕ್ಷಣ ಕ್ಷಣದಲ್ಲೂ ತಲ್ಲಣಗೊಳ್ಳುತ್ತಿದೆ, ಭಂಡ ಬದುಕಿನ ಬಳ್ಳಿಯನ್ನು ಹಿಡಿಯಲು ಮತ್ತೊಮ್ಮೆ ಮನಸ್ಸು ತವಕಿಸುತ್ತಿದೆ, ಆದರೂ ಹೃದಯ ಬಡಿತದ 
ಕೊನೆ ಕ್ಷಣಗಳ ಗಣನೆ ಆರಂಭಿಸಿದೆ. ಸಾಯುವ ಇಚ್ಛೆ ನನದಲ್ಲ, ಸಾಯುವ ವಯಸ್ಸೂ ನನ್ನದಲ್ಲ, ಸಾಯಲು ನನ್ನದಾದ ಯಾವುದೇ ಕಾರಣಗಳೂ ಇಲ್ಲ, ಆದರೂ ನಾನು ಸಾಯಬೇಕಿದೆ, ನಾನು ನಂಬಿಕೊಂಡ ಸಿದ್ಧಾಂತಗಳಿಗಾಗಿ. ನನ್ನ ಸಾವಿನಿಂದ ನಿಮ್ಮ ಜೀವನದಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣಬಹುದು ಎಂಬ ದೂರದ ಆಸೆಗಾಗಿ. ನನ್ನ ಸಾವಿನ ನಿಜವಾದ ಕಾರಣ ಈ ಪತ್ರದಿಂದ ನಿಮಗೆ ತಿಳಿಯುವುದಾದರೆ, ಅದುವೇ ಸಾಕ್ಷಿ ನನ್ನ ಅಸಹಾಯಕ ನಡೆಗೆ. ಸಾಯುವಾಗ ಇಟ್ಟ ಇನ್ನೊಂದು ಪತ್ರ ನಿಮ್ಮನ್ನು ತಲುಪುವ ಭರವಸೆ ಇಲ್ಲ, ನಮ್ಮ ರಕ್ಷಕರು ಅಷ್ಟು ನಿಷ್ಟರಾಗಿದ್ದರೆ ನಾನೀ ಕಾರ್ಯಕ್ಕೆ ತೊಡಗುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಗಾಗಿ ಮಾಧ್ಯಮಗಳಿಗೆ ಈ ಪತ್ರವನ್ನು ಕಳಿಸುತ್ತಿದ್ದೇನೆ, ನನ್ನ ಬಲಿದಾನ ಕೆಲವರಿಗಾದರೂ ಅರ್ಥವಾಗುತ್ತದೆ ಎಂಬ ಕಾರಣದಿಂದ.'

'ಚಿಕ್ಕಂದಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನೆಲ್ಲ ಓದುವಾಗ ರೋಮಾಂಚನವಾಗುತ್ತಿತ್ತು. ಅವರ ಧೈರ್ಯ, ನಿಸ್ವಾರ್ಥ ಸೇವೆಗಳನ್ನು ನೆನೆಸಿಕೊಂಡು ಮನಸ್ಸು ತುಂಬಿ ಬರುತ್ತಿತ್ತು. ಅವರ ಒಂದೊಂದು ವೀರ ನಡೆಯನ್ನು ನೆನೆಸಿ ಕೊಂಡಾಗಲೆಲ್ಲ ಮೈಯಲ್ಲಿ ವಿದ್ಯುತ್ ಸಂಚಾರವಾಗುತ್ತಿತ್ತು. ನಾನು ಅವರ ಹಾಗೆ ಆಗಬೇಕೆಂಬ ಮಹದಾಶೆ ಮೂಡಿತ್ತು. ಬೆಳೆಯುತ್ತ ಹೋದಂತೆಲ್ಲ ನಿಧಾನವಾಗಿ ವಾಸ್ತವದ ಅರ್ಥವಾಗತೊಡಗಿತು. ಆ ಹೋರಾಟಗಾರರ ಬಲಿದಾನಕ್ಕೆ ಇಂದು ಯಾವ ಅರ್ಥವೂ ಉಳಿದಿರಲಿಲ್ಲ. ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ, ಅದು ಬಲಿದಾನವೆನಿಸುತ್ತಿರಲಿಲ್ಲ, ಕೊಲೆಯಂತೆನಿಸುತ್ತಿತ್ತು. ನಮ್ಮನ್ನಾಳುವವರು ಮತ್ತೆ ಮತ್ತೆ ಅವರ ಕೊಲೆ ಮಾಡುತ್ತಿದ್ದರೆ, ನಾವೆಲ್ಲಾ ಮೌನವಾಗಿ ಕುಳಿತು ಅದನ್ನು ಸಮ್ಮತ್ತಿಸುತ್ತಿದ್ದೇವೆ ಅನಿಸುತ್ತಿತ್ತು. ಇಲ್ಲದಿದ್ದರೆ ಮತ್ತೆ ಮತ್ತೆ ಯಾಕೆ ನಾವು ಅವರನ್ನೇ ಆರಿಸುತ್ತೇವೆ, ಅವರಿರುವುದು ಲೂಟಿಗಾಗಿ ಮಾತ್ರ ಎಂದು ತಿಳಿದರೂ ಕೂಡ. ಒಮ್ಮೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಮೇಲೆ ಅದನ್ನು ವೈರಿಗಳ ಎದೆಯಾಳಕ್ಕಿಳಿಸಲು ನೂರು ವರ್ಷಗಳು ಹಿಡಿಯಿತು. ಆದರೆ ಅಷ್ಟು ಕಷ್ಟ ಪಟ್ಟು ಗಳಿಸಿದ್ದನ್ನು ಐವತ್ತು ವರ್ಷಗಳೊಳಗೆ ಅಡವಿಟ್ಟು ಪೈಶಾಚಿಕ ನಗೆ ಬೀರುತ್ತಿದ್ದೇವೆ. ಯಾರು ಕೂಡ ಯಾಕೆ ಧೈರ್ಯ ಮಾಡುತ್ತಿಲ್ಲ ಈ ಅತ್ಯಾಚಾರವನ್ನು ಎದುರಿಸಲಿಕ್ಕೆ. ಊಟಕ್ಕಿಲ್ಲದವರಿಗೆ ಊಟದ್ದೆ ಚಿಂತೆ, ಇದ್ದವರಿಗೆ ಇರುವುದೂ ತಪ್ಪಿ ಹೋಗುವುದೋ ಎಂಬ ಹೆದರಿಕೆ. ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವ ಧೈರ್ಯ ಯಾರಿಗೂ ಇಲ್ಲ'

'ಕಳೆದ ವಾರದ ನ್ಯಾಯಾಲಯದ ತೀರ್ಪಿನಿಂದ ನನ್ನಲ್ಲಿದ್ದ ತಾಳ್ಮೆ ಎಲ್ಲ ಮುಗಿದು ಹೋಗಿದೆ. ಈ ದೇಶವನ್ನು ಹಾಡು ಹಗಲಲ್ಲೇ ಕೊಳ್ಳೆ ಹೊಡೆಯುತ್ತಾರೆ, ಕೊಳ್ಳೆ ಹೊಡೆದ ಹಣದಲ್ಲಿ ಒಂದು ಪಾಲನ್ನು ಉಳಿದವರಿಗೆ ಬಿಸಾಕಿ ಕಾನೂನನ್ನು ಕಸದ ಬುಟ್ಟಿಯಲ್ಲಿ ತುಂಬುತ್ತಾರೆ. ದಿನ ಹೋದಂತೆ ಈ ಹಾಳು ರಾಜಕೀಯದಲ್ಲಿ ಈ ವೆಂಕಟಯ್ಯನಂತವರೇ ತುಂಬುತ್ತಿದ್ದಾರೆ. ಪ್ರತಿ ದಿನವೂ ಪತ್ರಿಕೆಯಲ್ಲಿ ಓದುತ್ತೇನೆ, ಇವತ್ತು ಹತ್ತು ಆತ್ಮಹತ್ಯೆ, ಐದು ಕೊಲೆ, ಎಂಟು ಅಪಘಾತ ಎಂಬುದಾಗಿ. ಹೀಗೆ ಸಾಯುವವರು ಯಾಕಾದರೂ ಒಂದಿಬ್ಬರು ಇಂತಹವರನ್ನು ಕೊಂದು ಸಾಯುವುದಿಲ್ಲ ಎಂದು ಪ್ರತಿ ದಿನ ಚಿಂತಿಸಿ ಚಿಂತಿಸಿ ಸಾಕಾಗಿದೆ.'

'ನನಗೆ ಸಚಿವ ವೆಂಕಟಯ್ಯನ ಮೇಲಾಗಲಿ, ಉಳಿದವರ ಮೇಲಾಗಲಿ ಯಾವುದೇ ವ್ಯಕ್ತಿಗತ ದ್ವೇಷವಿಲ್ಲ. ಆದರೆ ಅಷ್ಟು ದೊಡ್ಡ ಹಗರಣದ ನಂತರವೂ ರಾಜಾರೋಷವಾಗಿ ನಾಯಕರ ಹಾಗೆ ತಿರುಗುವುದು ನನ್ನಿಂದ ಸಹಿಸಲಾಗುತ್ತಿಲ್ಲ. ನ್ಯಾಯಾಲಯಕ್ಕೆ ಅವರ ತಪ್ಪಿನ ಸಾಕ್ಷಿ ಸಿಗದಿರಬಹುದು. ಆದರೆ ನನಗೆ ಯಾವುದೇ ಸಾಕ್ಷಿಯ ಅಗತ್ಯವಿಲ್ಲ. ಅವರ ಸಾವು ಸಮಸ್ಯೆಯ ಸಂಪೂರ್ಣ ಪರಿಹಾರವಲ್ಲ, ಆದರೆ ಅದರಿಂದ ಉಳಿದವರಲ್ಲಿ ಸ್ವಲ್ಪವಾದರೂ ಭಯ ಮೂಡುತ್ತದೆ. ಆ ಭಯವೇ ಮುಂದೊಮ್ಮೆ ಸಮಸ್ಯೆಯ ಪರಿಹಾರವಾಗಬುದೆಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ. ನನ್ನ ಕೆಲಸ ಒಳ್ಳೆಯ ಮಾರ್ಗದಲ್ಲವೆಂದು ನನಗೂ ತಿಳಿದಿದೆ. ಆದರೆ ಸದ್ಯಕ್ಕೆ ಈ ಮಾರ್ಗ ಬಿಟ್ಟು ಬೇರಾವುದು ನನಗೆ ತೋಚುತ್ತಿಲ್ಲ. ಸ್ವಾತಂತ್ಯ ಬರಿ ಅಹಿಂಸಾ ಮಾರ್ಗದಿಂದ ದೊರೆತಿಲ್ಲ, ಭಗತ್ ಸಿಂಗ್ ರಂತವರ ಕ್ರಾಂತಿ ಕೂಡ ಅದಕ್ಕೆ ಅಷ್ಟೇ ಸಹಕರಿಸಿದೆ. ನನ್ನ ಈ ಮಾರ್ಗಕ್ಕೆ ನನಗ್ಯಾರ ಸಮರ್ಥನೆಯೂ ಬೇಕಿಲ್ಲ. ನನ್ನ ತಪ್ಪಿಗೆ ನನ್ನ ಬಲಿದಾನವೇ ಪ್ರಾಯಶ್ಚಿತ್ತ. ಅದಕ್ಕೂ ನಾನು ಸಿದ್ದನಾಗಿಯೇ ಇದ್ದೇನೆ. 


ಆರಂಭದಲ್ಲಿ ತುಂಬಾ ಭಯವೆನ್ನಿಸಿತು, ಈ ಮೊದಲು ನಡೆಯದ ಹಾದಿ. ಖಾಸಗಿ ಬ್ಯಾಂಕಿನಲ್ಲಿ ಸಿಕ್ಕಿದಷ್ಟು ಸಾಲ ತೆಗೆದೆ, ತೀರಿಸುವ ಪ್ರಮೇಯವೇನೂ ಇರಲಿಲ್ಲ. ಈ ಮೊದಲು ಹೆದರುತ್ತಿದ್ದ, ಅಸಹ್ಯ ಪಟ್ಟುಕೊಳ್ಳುತ್ತಿದ್ದ ಸ್ಥಳಗಳನ್ನು, ಜನರನ್ನು ನೋಡಿದೆ. ವೆಂಕಟಯ್ಯನವರ ಚೇಲಾಗಳಲ್ಲೇ ಗೆಳೆತನ ಸಾಧಿಸಿದೆ. ಹಣವೊಂದಿದ್ದರೆ ಎಲ್ಲವೂ ಸಾಧ್ಯ. ವಿಪರ್ಯಾಸವೆಂಬಂತೆ ನನ್ನ ಕಾರ್ಯಸಾಧನೆಗೆ ಬೇಕಿದ್ದ ಎಲ್ಲವನ್ನೂ ಅವರಿಂದಲೇ ಸಂಪಾದಿಸಿದೆ. ಕೆಲ ದಿನಗಳಲ್ಲಿಯೇ ನನ್ನ ಗುರಿ ನನಗೆ ಸ್ಪಷ್ಟವಾಗಿ ಕಾಣತೊಡಗಿತು. ಇನ್ನೆರಡು ದಿನಗಳಲ್ಲಿ ನಗರದ ಕಾಲೇಜಿನಲ್ಲಿ 'ಭಾರತದ ಭವಿಷ್ಯ:ಯುವಜನರ ಪಾತ್ರ' ಸಮ್ಮೇಳನದ ಉದ್ಘಾಟನೆಗೆ ಬರುವವರಿದ್ದಾರೆ. ಅಂತಹ ಭ್ರಷ್ಟ ಮನುಷ್ಯನನ್ನು ಇಲ್ಲವಾಗಿಸಲು ಅದಕ್ಕಿಂತ ಒಳ್ಳೆಯ ವೇದಿಕೆ ಸಿಗುವುದು ಅಸಾಧ್ಯ. ಹಾಗಾಗಿ ಮನಸ್ಸನ್ನು ಕಲ್ಲಾಗಿಸಿ ನಿರ್ಧಾರ ತೆಗೆದುಕೊಂಡಾಗಿದೆ, ಎಲ್ಲ ಯೋಜನೆಗಳು ಪೂರ್ಣವಾಗಿದೆ.  

ಸಾವಿನ ಭಯ ಏನೆಂಬುದು ಸಾವಿಗೆ ಮುಖ ಮಾಡಿ ನಿಂತವನಿಗೆ ಮಾತ್ರ ತಿಳಿಯಲು ಸಾಧ್ಯ, ಉಳಿದವರ ಕಲ್ಪನೆಗೂ ಅದು ಸಿಗಲಾರದಂತಹುದು. ನನ್ನ ಸಾವು ಅನಿವಾರ್ಯವಲ್ಲವೆಂಬ ಮನಸ್ಸಿನ ಕ್ಷೀಣ ಧ್ವನಿ ಅದರ ಭಯವನ್ನು ಇನ್ನು ಹೆಚ್ಚಿಸಿದೆ. ಈ ವ್ಯವಸ್ಥೆಯ ಮೇಲಿನ ರೋಷ ಎಷ್ಟೇ ತೀವ್ರತರವಾಗಿದ್ದರೂ ಕೂಡ ಸಾವಿನ ಭಯವನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಅದಕ್ಕಿಲ್ಲ. ಆ ಅರಿವು ದೇಶಕ್ಕಾಗಿ ಜೀವವನ್ನೇ ತ್ಯಾಗ ಮಾಡಿದವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ. ಯಾವುದನ್ನಾದರೂ ಅನಿಭವಿಸಿದಾಗಲೇ ಅದರ ನಿಜವಾದ ಮಹತ್ವ ಅರಿವಾಗುವುದು. ಎರಡು ದಿನಗಳ ಅವಧಿಯಲ್ಲಿ ಸಾವಿನ ಭಯ ಮನಸ್ಸನ್ನು ವಿಚಲಿತಗೊಳ್ಳಿಸದಿರಲಿ ಎಂದು ಈ ಪತ್ರವನ್ನು ಈಗಲೇ ಮಾಧ್ಯಮಗಳಿಗೆ ಕಳಿಸುತ್ತಿದ್ದೇನೆ.  ಇದೊಮ್ಮೆ ಹೊರ ಹೋದ ಮೇಲೆ ಹೇಗೂ ನನಗೆ ಸಾವು ಕಟ್ಟಿಟ್ಟ ಬುತ್ತಿ. ಸಾವು ಅನಿವಾರ್ಯವೆಂಬ ಭಾವನೆ ಮನಸ್ಸಿಗೆ ಅರ್ಥವಾಗದ ಶಾಂತಿಯನ್ನು ಕೊಡುತ್ತಿದೆ. ನನ್ನ ಬದುಕು ಅರ್ಥಪೂರ್ಣವಾಗುತ್ತಿದೆ ಎಂಬ ಕಲ್ಪನೆ ಮನಸ್ಸಿಗೆ ಸಾರ್ಥಕತೆಯ ತೃಪ್ತಿಯನ್ನೂ ತರುತ್ತಿದೆ. 

ನಾನು ಮಾಡುತ್ತಿರುವುದೇ ಸರಿ, ಎಲ್ಲರೂ ನನ್ನ ಮಾರ್ಗವನ್ನೇ ಅನುಸರಿಸಲಿ ಎಂಬ ಬಯಕೆ ನನ್ನದಲ್ಲ. ನನ್ನ ಮಾರ್ಗ ಕೆಲವರಿಗೆ ತಪ್ಪೆನಿಸಬಹುದು. ಕೇವಲ ಭ್ರಷ್ಟಾಚಾರ ಮಾಡಿದವನಿಗೆ ಸಾವಿನ ಶಿಕ್ಷೆ ಹೆಚ್ಚು ಎಂದು ವಾದಿಸುವವರಿರಬಹುದು. ಆದರೆ ಆ ಭ್ರಷ್ಟಾಚಾರ ಬೇರೆಯವರ ಸಾವಿಗೆ ಹೇಗೆ ಕಾರಣವಾಗುತ್ತದೆ ಎಂದು ತಿಳಿದಿರುವವರೂ ನನ್ನಂತೆಯೇ ತುಂಬಾ ಜನರಿದ್ದಾರೆ. ನನ್ನ ಅಸಹಾಯಕ ಕೃತ್ಯ ಅವರಿಗಾದರೂ ಅರ್ಥವಾದರೆ ಸಾಕು. ವೆಂಕಟಯ್ಯನ ಸಾವು ಸಮಸ್ಯೆಯ ಪರಿಹಾರವಲ್ಲವೆಂದು ನನಗೂ ತಿಳಿದಿದೆ. ಆದರದು ಪರಿಹಾರದ ನಾಂದಿಯಾದರೂ ಸಹ ನನ್ನ ತ್ಯಾಗಕ್ಕೆ ಒಂದು ಅರ್ಥ ಸಿಗುತ್ತದೆ.'

ದೀಪಕನ ಸುದೀರ್ಘ ಪತ್ರ ಮುಗಿದಿತ್ತು. ನನಗೆ ಏನನ್ನೂ ನಂಬಲು ಸಾಧ್ಯವಾಗುತ್ತಿರಲಿಲ್ಲ. ಇಷ್ಟೊಂದು ಬದಲಾವಣೆ ದೀಪಕನಲ್ಲಿ ನಿರೀಕ್ಷಿರಲಿಲ್ಲ. ಏನೂ ಮಾಡಲು ತೋಚದೆ ಟೀವಿಯ ಎದುರಲ್ಲಿಯೇ ಕುಳಿತೆ. ಎಲ್ಲಾ ಚಾನಲ್ಗಳಲ್ಲೂ ದೀಪಕನದೆ ಸುದ್ದಿ. ಈ ಘಟನೆಯನ್ನು ಆದರಿಸಿ ನಾನಾ ತರದ ಕಾರ್ಯ ಕ್ರಮ ಆಯೋಜಿಸಿದ್ದರು. ಘಟನೆಯ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದರು. ಎಲ್ಲೋ ಕೆಲವು ಬೆರಳೆಣಿಕೆಯ ಜನರನ್ನು ಬಿಟ್ಟರೆ ಬೇರೆ ಎಲ್ಲರು ದೀಪಕನ ಕೃತ್ಯವನ್ನು ಮನಸ್ಸಾರೆ ಅಭಿನಂದಿಸುವವರೇ. ಕೆಲ ಕ್ಷಣಗಳಲ್ಲಿಯೇ ದೀಪಕ್ ಎಲ್ಲರ ಮನಸ್ಸಲ್ಲಿ ಬಹು ದೊಡ್ಡ ನಾಯಕನಾಗಿ ಮೂಡಿದ್ದ. ಎಲ್ಲರೂ ದೀಪಕನ ಧೈರ್ಯವನ್ನು ಮೆಚ್ಚಿ ಅವನ ಕಾರ್ಯವನ್ನು ಸಮರ್ಥಿಸುವವರೇ. ಸ್ವತಹ ದೀಪಕ್ ಕೂಡ ಅವನ ಕಾರ್ಯಕ್ಕೆ ಇಷ್ಟು ಜನ ಬೆಂಬಲ ನಿರೀಕ್ಷಿಸಿರಲಿಕ್ಕಿಲ್ಲ. ಇನ್ನು ಕೆಲ ಸಮಯದಲ್ಲಿ ಮಾಧ್ಯಮದವರು ನನ್ನನ್ನರಸಿ ಬರಬಹುದೇನೋ ಎಂದು ತಿಳಿದು ಹೊರಗಡೆ ಹೊರಟೆ. ನಾನಿನ್ನು ನಡೆದ ಘಟನೆಯಿಂದ ಹೊರ ಬಂದಿರಲಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಸಿಗದಿರುವಾಗ ಉಳಿದವರ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದೆಂದು ತಿಳಿಯದಾಗಿದ್ದೆ.


ಮಾಧ್ಯಮಗಳ ಕೈಯಿಂದ ತಪ್ಪಿಸಿಕೊಳ್ಳುವೆನೆಂಬುದು ಕೇವಲ ನನ್ನ ಕನಸಾಗಿತ್ತು. ಮನೆಯಿಂದ ಹೊರಟು ಗೆಳೆಯನ ಮನೆ ಸೇರಿದ ಕೆಲ ಕ್ಷಣಗಳಲ್ಲಿಯೇ ಮಾಧ್ಯಮಗಳ ಬಂಧಿಯಾಗಿದ್ದೆ. ಒಳ್ಳೆಯತನದ ಮುಖವಾಡ ಧರಿಸಿ ದೀಪಕನ ಪತ್ರಕ್ಕೆ ಅನುಗುಣವಾಗಿ ಕಥೆ ಹೆಣೆದು ಅವರೆಲ್ಲ ಪ್ರಶ್ನೆಗಳಿಗೂ ಉತ್ತರಿಸಿದೆ. ಕಳೆದ ಕೆಲವು ದಿನಗಳಿಂದ ದೀಪಕ ನಮ್ಮಿಂದ ದೂರವಾಗಿದ್ದುದು ಒಳ್ಳೆಯದೇ ಆಗಿತ್ತು. ಇಲ್ಲದಿದ್ದರೆ ಪೋಲೀಸು, ಅದು ಇದು ಅಂದು ಬೀದಿ ನಾಯಿಯ ತರ ಅಲೆಯಬೇಕಿತ್ತು. ಮಾಧ್ಯಮಗಳ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ದೀಪಕನನ್ನು ಬೆಂಬಲಿಸಿದ್ದರಿಂದ ಹಾಗು ದೀಪಕನೆ ಆತ್ಮಹತ್ಯೆಯ ಪತ್ರದಲ್ಲಿ ಎಲ್ಲವನ್ನು ಸಾಕ್ಷಿ ಸಮೇತ ಬರೆದಿರುವುದರಿಂದ ಅವನ ಅಂತ್ಯ ಕ್ರಿಯೆಗೆ ಹೆಚ್ಚಿನ ತಡೆಯಾಗಲಿಲ್ಲ. ಸಾಕಷ್ಟು ಜನರ ಸಮ್ಮುಖದಲ್ಲಿ ನಡೆದ ಅಂತ್ಯ ಕ್ರಿಯೆ ಮುಗಿಸಿ ಮನೆಗೆ ಬಂದು ಬಾಗಿಲು ತೆರೆದರೆ, ಬಾಗಿಲ ಹತ್ತಿರವೇ ಒಂದು ಪತ್ರ ಕಾಣಿಸಿತು. ನನ್ನ ಹೆಸರಿಗೆ ಬರೆದ ಪತ್ರ, ಅಕ್ಷರ ನೋಡಿದರೆ ದೀಪಕನನೆನ್ನುವುದರಲ್ಲಿ ಸಂದೇಹವಿಲ್ಲ. ಮಾಧ್ಯಮಕ್ಕೆ ಕಳಿಸಿದ ಪತ್ರವನ್ನೇ ನನಗೆ ಕಳಿಸಿರಬಹುದೇ, ಗೊತ್ತಾಗಲಿಲ್ಲ. ಕೂಡಲೇ ಬಾಗಿಲು ಭದ್ರ ಪಡಿಸಿ ಪತ್ರ ಓದಲಾರಂಭಿಸಿದೆ.

Sunday, June 3, 2012

ಗೋಪಾಲ

ಮಾಮೂಲಿನಂತೆ ಬೆಳಗ್ಗೆ ಎಂಟು ಘಂಟೆಗೆ ಗ್ಯಾರೇಜಿಗೆ ಬಂದಿದ್ದೆ. ಮೊದಲಿನಂತೆ ಹೆಚ್ಚಿನ ಕೆಲಸವೇನೂ ಇರಲಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಎಲ್ಲ ಅಂದುಕೊಂಡಂತೆ ನಡೆಯುತ್ತಿತ್ತು. ಎಲ್ಲ ನಮ್ಮ ಗೋಪಾಲಣ್ಣನ ಕೃಪೆ. ಮೂರು ವರ್ಷಗಳ ಹಿಂದೆ ಅವರ ತಂದೆಯೇ ಗ್ಯಾರೇಜ್ ನಡೆಸುತ್ತಿದ್ದರು. ಆವಾಗ ಬೆಳಿಗ್ಗೆ ಎಂಟು ಘಂಟೆಗೆ ಗ್ಯಾರೇಜಿಗೆ ಬಂದರೆ ಸಂಜೆ ಎಂಟು ಘಂಟೆಯ ತನಕ ಕತ್ತೆ ಹಾಗೆ ದುಡಿಯಬೇಕಿತ್ತು. ಕೆಲಸವೇನೋ ಚೆನ್ನಾಗೆ ತಲೆಗೆ ಹತ್ತಿತ್ತು, ಆದರೆ ಘಳಿಗೆ ಘಳಿಗೆಗೂ ಅವರ ಬಯ್ಗಳ ಕೇಳಿ ತಲೆ ಚಿಟ್ಟು ಹಿಡಿಯುತ್ತಿತ್ತು. ಮನೆ ತಲುಪುವ ತನಕ ಅವರಿಗೆ ಮನಸ್ಸೊಳಗೆ ಹಿಡಿ ಶಾಪ ಹಾಕುವುದು ಬಿಟ್ಟರೆ ಬೇರೇನೂ ಮಾಡಲಾಗುತ್ತಿರಲಿಲ್ಲ. ಈ ಗ್ಯಾರೇಜು ಬಿಟ್ಟರೆ ಬೇರೆ ಕೆಲಸ ಕೊಡುವವರು ಯಾರೂ ಇರಲಿಲ್ಲ. ಅಂತೂ ಅವರು ಮೂಲೆ ಸೇರಿ ಎಲ್ಲ ಗೋಪಾಲಣ್ಣನೆ ನೋಡಿಕೊಳ್ಳಲು ಶುರು ಮಾಡಿದ ಮೇಲೆ ಕೆಲಸ ಕೆಲಸದಂತೆಯೇ ಅನಿಸುತ್ತಿರಲಿಲ್ಲ. ಬೆಳಿಗ್ಗೆ ಸ್ವಲ್ಪ ಹೊತ್ತು ಗೋಪಾಲಣ್ಣನ ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡಿ ಗ್ಯಾರೇಜಿಗೆ ಬಂದರೆ, ಸಂಜೆ ಆರರ ಒಳಗಡೆ ಕೆಲಸ ಮುಗಿಸಿ ರೈಲ್ವೆ ಸ್ಟೇಷನ್ ಹತ್ತಿರ ಎಲ್ಲ ಸೇರಿ ಆಡಲು ಶುರು ಮಾದುತ್ತಿದ್ವಿ. ಎಲ್ಲಕ್ಕೂ ಗೋಪಾಲಣ್ಣನದೆ ಮುಂದಾಳುತನ. ಗೋಪಾಲಣ್ಣ ಏನಾದರೂ ಹೇಳಿದರೆ ಇಲ್ಲ ಎನ್ನುವ ಧೈರ್ಯ ನಮ್ಮ ಗುಂಪಿನಲ್ಲಿ ಯಾರಿಗೂ ಇರಲಿಲ್ಲ, ಯಾರಾದರೂ ಅಡ್ಡಗಾಲು ಹಾಕಿದರೂ, ಅವರನ್ನು ದಾರಿಗೆ ತರುವುದು ದೊಡ್ಡ ಕಷ್ಟದ ಕೆಲಸವೇನೂ ಆಗಿರಲಿಲ್ಲ, ನಮ್ಮ ಗೋಪಾಲಣ್ಣನಿಗೆ.


ಹೋದ ವರ್ಷ ಹೊಸ ಸರಕಾರ ಬಂದ ಮೇಲಂತೂ ಗೋಪಾಲಣ್ಣ ಆಡಿದ್ದೆ ಮಾತು. ನಮ್ಮ ಗ್ಯಾರೇಜಿನ ಹುಡುಗರಲ್ಲದೇ ಗೋಪಾಲಣ್ಣ ಇನ್ನು ಕೆಲವು ಹುಡುಗರಿಗೆ ಬೇರೆ ಬೇರೆ ಕೆಲಸ ಕೊಡಿಸಿದ್ದರು. ಅವರನ್ನೆಲ್ಲ ಸೇರಿಸಿಕೊಂಡು ಚುನಾವಣಾ ಸಮಯದಲ್ಲಿ ಸಹ ಸಾಕಷ್ಟು ಓಡಾಡಿ ನಮ್ಮ ಏರಿಯಾವೆಲ್ಲ ಅವರದೇ ಹಿಡಿತದಲ್ಲಿದೆಯೆಂಬ ನಂಬಿಕೆ ಶಾಸಕರಲ್ಲಿ ತಂದಿದ್ದರು. ಹಾಗಾಗಿ ಶಾಸಕರಿಗೆ ತುಂಬಾ ಹತ್ತಿರದವರು ಎಂದು ಎಲ್ಲರಲ್ಲೂ ಏನೋ ಒಂತರ ಹೆದರಿಕೆ ಇತ್ತು. ಆ ಸಮಯದಲ್ಲೇ ಎಲ್ಲ  ಹುಡುಗರನ್ನು ಸೇರಿಸಿ 'ಶ್ರೀ ಮಾರುತಿ ಹಿಂದೂ ಸಭಾ' ಎಂಬ ಹೊಸ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದರು. ಮಾರುತಿ ಸಂಘದ ಕಾರ್ಯವ್ಯಾಪ್ತಿಯೇನೋ ಬಲು ಸೀಮಿತವಾಗಿತ್ತು. ಪ್ರತಿ ಭಾನುವಾರ ಅವರ ವ್ಯಾಯಾಮ ಶಾಲೆಯಲ್ಲೇ ಸಭೆ ಸೇರುತ್ತಿದ್ದೆವು. ಅದು ಹೇಗೋ ಊರಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳ ವರದಿಗಳೂ ಗೋಪಾಲಣ್ಣನಿಗೆ ಎಲ್ಲರಿಗೂ ಮೊದಲೇ ತಿಳಿಯುತ್ತಿತ್ತು. ದಾರಿಯಲ್ಲಿ ಹೋಗುವ ಹೆಣ್ಣುಮಕ್ಕಳಿಗೆ ಚೇಡಿಸುವವರಿಗೆ, ಸಂಜೆ ಹೊತ್ತು ಕುಡಿದು ಜೋರಾಗಿ ರಂಪ ಮಾಡುವವರಿಗೆಲ್ಲ ಮಾರುತಿ ಸಂಘದ ಹೆದರಿಕೆ ನಿಧಾನವಾಗಿ ಹುಟ್ಟಲು ಶುರುವಾಗಿತ್ತು. ಹೆಚ್ಚಿನ ದಿನಗಳಲ್ಲಿ ನಮ್ಮ ಸಮಾಜ ಸೇವೆ ಮುಗಿದ ಮೇಲೆ ಗೋಪಾಲಣ್ಣ ಅವರದೇ ಖರ್ಚಲ್ಲಿ ಸಂಜೆ ಹೊಟ್ಟೆ ತುಂಬಾ ಕುಡಿಯಲು ವ್ಯವಸ್ಥೆ ಮಾಡಿಸುತ್ತಿದ್ದರು. ಹಾಗಾಗಿ ನಮ್ಮೆಲ್ಲರಿಗೆ 'ಸಮಾಜ ಸೇವೆಯ' ಮೇಲೆ ಸ್ವಲ್ಪ ಜಾಸ್ತಿಯೇ ಒಲವು ಶುರುವಾಗಿತ್ತು.


ಇವತ್ತು ಘಂಟೆ ಹನ್ನೊಂದಾದರೂ ಗ್ಯಾರೇಜಿನ ಹತ್ತಿರ ಗೋಪಾಲಣ್ಣನ ಸುಳಿವೇ ಇರಲಿಲ್ಲ, ಬೇರೆ ದಿನಗಳಲ್ಲಿ ಹತ್ತು ಘಂಟೆಯೊಳಗೆ ಒಮ್ಮೆಯಾದರೂ ಬಂದು ಮುಖ ತೋರಿಸಿ ಹೋಗುವವರು. ನಮ್ಮ ಪಾಡಿಗೆ ನಾವು ಕೆಲಸ ಮಾಡಿ ಕೊಂಡಿದ್ದೆವು. ಅಷ್ಟರಲ್ಲಿ ನನ್ನ ಮೊಬೈಲಿಗೆ ಕರೆ ಬಂದಿತು, ನೋಡಿದರೆ ಗೋಪಾಲಣ್ಣನದೆ. ಹಾಗೆಲ್ಲ ಕರೆ ಮಾಡುವವರಲ್ಲ ಅವರು. ಏನೋ ಅಗತ್ಯದ ಕೆಲಸವೇ ಇರಬೇಕು. 'ಕೃಷ್ಣ, ಬೇಗ ವ್ಯಾಯಾಮ ಶಾಲೆ ಹತ್ತಿರ ಬಂದು ಬಿಡು. ಹುಡುಗರ ಹತ್ತಿರ ಎಲ್ಲಿಗೆಂದು ಹೇಳೋದು ಬೇಡ. ಗ್ಯಾರೇಜ್ ಕಡೆ ಸ್ವಲ್ಪ ನೋಡಿಕೊಳ್ಳಲಿಕ್ಕೆ ಹೇಳು, ಬರುವುದು ಒಂದೆರಡು ಘಂಟೆ ಆಗಬಹುದು' ಅಂದರು. ಕೂಡಲೇ ಬೈಕ್ ಹಿಡಿದು ಹೊರಟೆ, ಹತ್ತು ನಿಮಿಷದ ದಾರಿಯಷ್ಟೇ ಗ್ಯಾರೇಜಿನಿಂದ. 


ವ್ಯಾಯಾಮ ಶಾಲೆ ಹತ್ತಿರ ಅವಾಗಲೇ ಎಲ್ಲ ಹುಡುಗರು ಸೇರಿದ್ದರು, ಹೆಚ್ಚು ಕಡಿಮೆ ಹತ್ತು ಜನರಿದ್ದರು.  'ಬಾ ಬಾ, ನಿನಗೊಸ್ಕರವೇ ಎಲ್ಲ ಕಾಯ್ತಾ ಇದ್ದೆವು' ಗೋಪಾಲಣ್ಣ ಸ್ವಲ್ಪ ಜಾಸ್ತಿಯೇ ಉತ್ಸಾಹದಿಂದಿದ್ದರು. 'ನಿಮಗೆಲ್ಲ ಈವಾಗಲೇ ಗೊತ್ತಿರಬಹುದು, ಇತ್ತೀಚಿಗೆ ನಮ್ಮ ಊರಿನಲ್ಲಿ ದನಗಳನ್ನು ಬೇರೆ ಕಡೆ ಮಾಂಸಕ್ಕಾಗಿ ಸಾಗಿಸುವುದು ಜಾಸ್ತಿಯಾಗಿದೆ.  ನಾವೆಲ್ಲಾ ಹೀಗೆ ಕೈ ಕಟ್ಟಿ ಕುಳಿತರೆ ಕೊನೆಗೆ ಹಾಲು ಕರೆಯಲಿಕ್ಕೆ ಒಂದು ದನ ಕೂಡ ಸಿಗುವುದೂ ಕಷ್ಟವಾಗುತ್ತದೆ. ಯಾರಾದರೂ ಒಬ್ಬರಿಗೆ ಈ ಹೀನ ಕೆಲಸ ಮಾಡುವಾಗ ನಾಲ್ಕು ತದುಕಿ ಬುಧ್ಧಿ ಕಲಿಸಿದರೆ, ಉಳಿದವರಿಗೆಲ್ಲ ಒಂದು ಪಾಠವಾಗುತ್ತದೆ'. ಗೋಪಾಲಣ್ಣ ಎಲ್ಲರನ್ನು ಕರೆಸಿದ್ದ ಕಾರಣ ಹೇಳುತ್ತಾ ಹೋದರು. 'ಹೌದು ಹೌದು, ಹೋದ ವಾರ ಆ ಅಬ್ದುಲ್ ಸಾಯಿಬರು ಎರಡು ಗುಡ್ಡ(ಗೂಳಿ) ಮತ್ತು ಒಂದು ದನ ಟೆಂಪೋದಲ್ಲಿ ಹಾಕಿಕೊಂಡು ಹೋಗುವುದನ್ನು ನಾನೇ ನೋಡಿದ್ದೆ. ಎಲ್ಲ ತೆಗೆದುಕೊಂಡು ಪೇಟೆಯ ಮಾಂಸಾಹಾರಿ ಹೋಟಲಿಗೆ ಮಾರುತ್ತಾರಂತೆ. ಗೋವುಗಳೆಂದರೆ ನಮ್ಮ ದೇವರೆಂಬ ಪ್ರಜ್ಞೆ ಸಹ ಇವರಿಗೆ ಇಲ್ಲ'. ನಾನು ಗೋಪಾಲಣ್ಣನಿಗೆ ಸಾಥ್ ನೀಡಲು ಹೋದೆ. ಅಬ್ದುಲ್ ಸಾಬಿಯನ್ನು ನೋಡಿದರೆ ನನಗೆ ಮೊದಲಿಂದಲೂ ಆಗುತ್ತಿರಲಿಲ್ಲ. ಪ್ರೈಮರಿ ಶಾಲೆಗೆ ಹೋಗುವಾಗ ಅವರ ಮನೆಯ ಹತ್ತಿರವೇ ಹೋಗಬೇಕಿತ್ತು. ಅವಾಗೆಲ್ಲ ಕೆಳಗಡೆ ಬಿದ್ದ ಅವರ ಮಾವಿನಮರದ ಹಣ್ಣು ಹೆಕ್ಕಿದರೂ ಕೋಲು ಹಿಡಿದುಕೊಂಡು ಬರುತ್ತಿದ್ದರು. ದೊಡ್ಡವರಾದ ಮೇಲೂ ಕೆಲವು ಬಾರಿ ಅವರೊಡನೆ ಒಂದಲ್ಲ ಒಂದು ಕಾರಣಕ್ಕೆ ಜಗಳವಾಗುತ್ತಲೇ ಇತ್ತು. ಗೋಪಾಲಣ್ಣ ದನ ಸಾಗಾಣಿಕೆ ವಿಷಯ ತೆಗೆದಾಗ ಇವರ ಕುರಿತೇ ತೆಗೆದಿರಬಹುದೆಂದು ಯೋಚಿಸಿದ್ದೆ.  ಒಮ್ಮೆ ಕೈಗೆ ಸಿಕ್ಕಿದರೆ ಚೆನ್ನಾಗಿ ತದುಕಿ ಅವರ ಮೇಲಿನ ಸಿಟ್ಟನ್ನೆಲ ತೀರಿಸಿಕೊಳ್ಳಬೇಕಿತ್ತು.


'ಹೌದು ಹೌದು, ಇಂತಹವರದ್ದೆಲ್ಲ ಒಂದು ದೊಡ್ಡ ಗುಂಪೇ ಇದೆ, ನಾನು ಕೆಲವು ದಿನಗಳಿಂದ ಅದರ ಬಗ್ಗೆಯೇ ಯೋಚಿಸುತ್ತಿದ್ದೆ. ಆದರೆ ಯಾವುದೇ ಸರಿಯಾದ ಮಾಹಿತಿ ಇರದೇ ಸುಮ್ಮನಿದ್ದೆ. ಇವತ್ತು ಕೂಡ ನಮ್ಮೂರಿಂದ ಕೆಲವು ದನಗಳನ್ನು ಹಾಡು ಹಗಲೇ ಸಾಗಿಸುತ್ತಿದ್ದರೆಂಬ ಸುದ್ದಿ ನನಗೆ ಬಂದಿದೆ. ಅದೂ ಕೂಡ ನಮ್ಮದೇ ಕೋಮಿಗೆ ಸೇರಿದ ಪಾಟಲಿ ಅನಂತ ಎಂಬುವವನು. ನನಗೆ ಗೊತ್ತಿದ್ದ ಹಾಗೆ ಮಧ್ಯಾಹ್ನ ಹನ್ನೆರಡು-ಹನ್ನೆರಡುವರೆಗೆ ಅವನ ಗಾಡಿ ಏರು ರಸ್ತೆ ಹತ್ತಿರ ಬರಬಹುದು. ಜನರ ಓಡಾಟ ಸಹ ಕಮ್ಮಿಯೇ ಇರುತ್ತದೆ. ಕೈ ಕಾಲು ಮುರಿಯುವ ಹಾಗೆ ಒಮ್ಮೆ ಬಾರಿಸಿದರೆ ಇನ್ಯಾರು ಸಹ ಮುಂದೆ ನಮ್ಮೂರಿನಲ್ಲಿ ದನ ಸಾಗಿಸೋ ಕೆಲಸ ಮಾಡುವುದಿಲ್ಲ' ಗೋಪಾಲಣ್ಣ ಎಲ್ಲ ಪ್ಲಾನ್ ಮಾಡಿಕೊಂಡೆ ಬಂದಿದ್ದರು. ನಮ್ಮ ಗುರಿ ಅಬ್ದುಲ್ ಸಾಬಿ ಅಲ್ಲ ಅಂದ ಕೂಡಲೇ ನನ್ನ ಉತ್ಸಾಹವೆಲ್ಲ ಒಮ್ಮೆಲೇ ಇಳಿಯಿತು. ಅದು ಬೇರೆ ಅನಂತಣ್ಣನನ್ನು ಒಂದೆರಡು ಬಾರಿ ನೋಡಿದ ನೆನಪು. ಅಮ್ಮನಿಗೆ ಸ್ವಲ್ಪ ಒಳ್ಳೆಯ ಪರಿಚಯವಿದ್ದವರು ಬೇರೆ. ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಹಾಗಾಯಿತು. ನಿದಾನವಾಗಿ ಹೇಳಿದೆ, 'ಅನಂತಣ್ಣನಿಗೆ ಹೊಡೆಯುವುದು ಅಷ್ಟು ಸರಿ ಕಾಣುವುದಿಲ್ಲ ನನಗೆ, ನಮ್ಮದೇ ಕೋಮಿನವರು ಬೇರೆ, ಅದು ಬೇರೆ ಜಾತಿಯಲ್ಲಿ ಬ್ರಾಹ್ಮಣರು. ಅವರಿಗೆ ಹೊಡೆಡದು ಗೊತ್ತಾದರೆ ಊರಲ್ಲಿ ಎಲ್ಲ ನಮ್ಮೆದುರು ಬೀಳಬಹುದು. ಇನ್ನು ಸ್ವಲ್ಪ ದಿನ ಬಿಟ್ಟರೆ ಅಬ್ದುಲ್ ಸಾಬಿಯೇ ದನ ತೆಗೆದುಕೊಂಡು ಹೋಗುವಾಗ ಸಿಗಬಹುದು'. ಕೆಲವರು ತಲೆಯಾಡಿಸಿದರು, ನನ್ನ ಮಾತು ಸ್ವಲ್ಪ ಸರಿಯೆನ್ನಿಸಿತಿರಬೇಕು. 'ನಾನು ಅದೆಲ್ಲ ಆಲೋಚಿಸಿಯೇ ಈ ನಿರ್ಧಾರಕ್ಕೆ ಬಂದಿರುವುದು. ನಮ್ಮ ಮುಖ್ಯ ಉದ್ದೇಶ ಈ ದನ ಸಾಗಣಿಕೆ ತಡೆಯುವುದು ಮಾತ್ರ. ಆದರೆ ಅದಕ್ಕೆ ಅಬ್ದುಲ್ ಸಾಬಿಯನ್ನು ಹೊಡೆದರೆ ಸುಮ್ಮನೆ ರಾಜಕೀಯ ಮೈಗೆ ಎಳೆದುಕೊಂಡ ಹಾಗೆ ಆಗುತ್ತೆ. ಸುಮ್ಮನೆ ಕೋಮು ಗಲಭೆ ಎಲ್ಲ ಸೃಷ್ಟಿಸಿ ಇಲ್ಲ ಸಲ್ಲದ್ದು ಮಾಡುವುದು ಬೇಡ. ಅಲ್ಲದೆ ಈ ಅನಂತ ಏನೂ ಪೂಜೆ ಮಾಡುವ ಭಟ್ಟರ ಜಾತಿ ಅಲ್ಲ, ಬ್ರಾಹ್ಮಣರಲ್ಲಿ ಯಾವುದೋ ತುಂಬಾ ಕೆಳ ಜಾತಿ. ಅದೂ ಬೇರೆ ನಮ್ಮ ಕೊಮಿನವರಾಗಿ ಪೂಜೆ ಮಾಡೋ ದನವನ್ನು ಕೊಲ್ಲುವುದು ಮಹಾ ಪಾಪ. ಕಳೆದ ವಾರ ಗದ್ದೆಯಲ್ಲಿ ಮೇಯುತ್ತಿದ್ದ ನಮ್ಮ ಮನೆಯ ಗುಡ್ಡವನ್ನು ಯಾರಿಗೂ ಗೊತ್ತಾಗದ ಹಾಗೆ ಸಾಗಿಸಲು ನೋಡುತ್ತಿದ್ದನಂತೆ. ಮತ್ತೆ ಸುದ್ದಿ ತಿಳಿದು ದಬಾಯಿಸಿದ ಮೇಲೆ ಸುಳ್ಳು ಹೇಳಿ ತಪ್ಪಿಸಿಕೊಂಡ. ಹಾಗಾಗಿ ಅವನಿಗೆ ಬುಧ್ಧಿ ಕಲಿಸುವುದೇ ಸಮ. ಅದೂ ಬೇರೆ ಈ ಸಮಯದಲ್ಲಿ ಅಲ್ಲಿ ಯಾವ ನರಪಿಳ್ಳೆಯೂ ಇರುವುದಿಲ್ಲ. ಮುಖಕ್ಕೆ ಒಂದು ಬಟ್ಟೆ ಹಾಕಿಕೊಂಡರೆ ಯಾರಿಗೂ ತಿಳಿಯುವುದಿಲ್ಲ ಇದು ನಮ್ಮ ಕೆಲಸವಂತ. ಹಾಗೊಮ್ಮೆ ತಿಳಿದರೂ ಹೆದರುವ ಅಗತ್ಯವೇನೂ ಇಲ್ಲ. ಇಲ್ಲಿನ ಸಬ್ ಇನ್ಸ್ ಪೆಕ್ಟರ್ ನನಗೆ ಒಳ್ಳೆಯ ಪರಿಚಯದವೆರೆ'. ಗೋಪಾಲಣ್ಣ ಎಲ್ಲ ಪ್ರಶ್ನೆಗಳಿಗೆ ಮೊದಲೇ ಉತ್ತರ ಸಿಧ್ಧಪಡಿಸಿಕೊಂಡ ಹಾಗಿತ್ತು. ಅವರೊಡನೆ ಮಾತನಾಡಿ ಗೆಲ್ಲುವುದು ನಮ್ಮಲ್ಲಿ ಯಾರಿಗೂ ಸಾಧ್ಯವಿರಲಿಲ್ಲ. ಮುಂದೆ ಮಾತನಾಡದೆ ಸುಮ್ಮನಾದೆ. ಯಾರಿಗಾದರೂ ಇನ್ನೇನಾದರು ಪ್ರಶ್ನೆ ಇದ್ದರೆ ಹೇಳಿ. ನಮ್ಮ ಸಂಘದಲ್ಲಿ ಏನೂ ಮಾಡುವುದಿದ್ದರೂ ನಿಮ್ಮೆಲ್ಲರ ಒಪ್ಪಿಗೆ ಪಡೆದೆ ಮಾಡುವುದು'. ಗೋಪಾಲಣ್ಣನ ಮಾತಿಗೆ ಎಲ್ಲರದೂ ಸಮ್ಮತ ಕಂಡು ಬಂದಿತು.


ಗೋಪಾಲಣ್ಣ ಒಂದು ವಾರದಿಂದ ಇದಕ್ಕಾಗಿ ಕಾಯುತ್ತಿದ್ದರನಿಸುತ್ತದೆ. ಎಲ್ಲ ಸಿಧ್ಧತೆ ಮಾಡಿಕೊಂಡೆ ನಮ್ಮನ್ನೆಲ್ಲ ಬರಹೇಳಿದ್ದರು. ಮೂಲೆಯಲ್ಲಿ ಕೆಲ ಹಾಕಿ ದಾಂಡುಗಳು ಬಿದ್ದಿದ್ದವು. ನಿನ್ನೆ ಅವನ್ನೆಲ್ಲ ನೋಡಿದ ನೆನಪು ಬರಲಿಲ್ಲ. ಮತ್ತೆ ಸ್ವಲ್ಪ ಹೊತ್ತು ಅದು ಇದು ಮಾತನಾಡಿ ಎಲ್ಲ ಹೊರಟೆವು, ಎರಡು ಮಾರುತಿ ವ್ಯಾನ್ ಗಳಲ್ಲಿ. ಎಲ್ಲರು ಒಂದೊಂದು ಹಾಕಿ ದಾಂಡು ಹಿಡಿದಿದ್ದರು. ಇಷ್ಟು ದಿನ ಬರಿ ಕೈಯಲ್ಲಿ ಹೊಡೆಯುವುದೋ, ಅಥವಾ ಬಾಯಲ್ಲಿ ಗದರಿಸುವುದೋ ಮಾಡುತ್ತಿದ್ದೆವು. ನನ್ನ ಕೈ ನಿಧಾನವಾಗಿ ನಡುಗುತ್ತಿದ್ದರೆ, ಉಳಿದವರಿಗೆ ಏನೋ ಮೇಲ್ಮಟ್ಟಕ್ಕೆ ಏರಿದ ಅನುಭವ . ಹನ್ನೆರಡು ಘಂಟೆಗೆ ಸರಿಯಾಗಿ ಏರು ರಸ್ತೆಯ ಬಳಿ ಬಂದು, ಅಲ್ಲೇ ಮರದ ಹತ್ತಿರ ಗಾಡಿ ನಿಲ್ಲಿಸಿ ರಸ್ತೆಗೆ ಕಲ್ಲು ಹಾಕಿ ಕಾಯುತ್ತ ನಿಂತೆವು. ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದ, ಬಿಸಿಲು ಜೋರಾಗಿತ್ತು. ನಮ್ಮನ್ನು ಬಿಟ್ಟರೆ ಬೇರೆ ಯಾರೂ ಕಾಣುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ  ಕೆಳಗಡೆ ಇಳಿಜಾರಿನಲ್ಲಿ ಯಾವುದೇ ಚಿಕ್ಕ ಸಾಮಾನಿನ ಗಾಡಿ ಬಂದಂತನಿಸಿತು. ಗೋಪಾಲಣ್ಣ ಕೂಡಲೇ ಕಾರ್ಯಪ್ರವ್ವತ್ತರಾದರು. 'ಎಲ್ಲ ರೆಡಿಯಾಗಿ, ಅದು ಆ ಬೊ... ಮಗನದೇ ಗಾಡಿ' ವ್ಯಾನ್ ನಿಂದ ಇಳಿದು ರಸ್ತೆಯತ್ತ ನಡೆದರು. ಪ್ಯಾಂಟಿನಲ್ಲಿದ್ದ ದೊಡ್ಡ ಕರವಸ್ತ್ ತೆಗೆದು ಸ್ವಲ್ಪ ಮುಖ ಮರೆಯಾಗುವ ಹಾಗೆ ಕಟ್ಟಿಕೊಂಡೆ.  


ಅನಂತಣ್ಣನ ಗಾಡಿ ಏರು ಹತ್ತಿದ ಕೂಡಲೇ ನಿಂತಿತು. ಅವರೇ ಕೆಳಗಡೆ ಇಳಿದುದು ಕಾಣಿಸಿತು, ಬಹುಶ ರಸ್ತೆಯಲ್ಲಿದ್ದ ಕಲ್ಲುಗಳನ್ನು ಸರಿಸಲು ನೋಡಿದರು ಅನ್ನಿಸುತ್ತದೆ. ಇನ್ನೊಂದು ಕಡೆಯಿಂದ ಬರುತ್ತಿದ್ದ ನಮ್ಮ ಗುಂಪನ್ನು ನೋಡಲಿಲ್ಲ. ಚಾಲಕ ನಮ್ಮನ್ನು ನೋಡಿ ಗಾಬರಿ ಬಿದ್ದು ಕೂಗಿ ಕೊಳ್ಳ ತೊಡಗಿದ. ಅಷ್ಟರಲ್ಲಿ ಹುಲಿಯಂತೆ ಓಡಿ ಗೋಪಾಲಣ್ಣ ಹಿಂದಿನಿಂದ ಒಂದು ಬಲವಾದ ಏಟನ್ನು ಹಾಕಿದ್ದರು, ಅನಂತಣ್ಣನ ಬೆನ್ನಿಗೆ. ಒಂದಿಬ್ಬರು ಚಾಲಕನನ್ನು ಕೆಳಗೆಳೆದು ನಾಲ್ಕೇಟು ಬಿಗಿದು ಬಾಯಿ ಮುಚ್ಚಿ ನಿಲ್ಲಲು ಸೂಚಿಸಿದರು. ಹಿಂದಿನಿಂದ ಬಿದ್ದ ಬಲವಾದ ಪೆಟ್ಟಿಗೆ ಸಾವರಿಸಿಕೊಳ್ಳಲು ಅನಂತಣ್ಣನಿಗೆ ಆಗಲಿಲ್ಲ. ಪೆಟ್ಟಿಗಿಂತ ಹೆಚ್ಚಾಗಿ ಎಣಿಸದ  ಘಟನೆಯ ಆಘಾತವೇ ಹೆಚ್ಚಾಗಿತ್ತನಿಸುತ್ತದೆ. ಬೀಳುತ್ತಿದ್ದ ಅವರ ಶರ್ಟಿನ ಕಾಲರ್ ಹಿಡಿದು ಎಳೆಯುತ್ತಿದ್ದ ಗೋಪಾಲಣ್ಣನ ಮುಖದಲ್ಲಿ ರೋಷ ಮನೆ ಮಾಡಿತ್ತು. 'ಬೊ.. ಮಗನೆ, ದನ ಸಾಗಿಸಿ ಮಾಂಸಕ್ಕಾಗಿ ಮಾರುತ್ತೀಯ. ಅದು ಸಾಲದೇ ನಮ್ಮ ಮನೆ ಆಕಳಿಗೆ ಕೈ ಹಾಕ್ತೀಯ. ಹೋದ ವಾರ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಿಯಲ್ಲ, ಈಗ ಮಾತಾಡು ಬೊ..ಮಗನೆ'. ಮಾತನಾಡಲು ಹೊರಟ ಅನಂತಣ್ಣನಿಗೆ ಮಾತಾಡುವ ಅವಕಾಶವನ್ನೇ ಕೊಡದೆ 'ಕೃಷ್ಣ, ಗಾಡಿಯಲ್ಲಿರೋ ದನಗಳನ್ನೆಲ್ಲ ಬೇಗ ಬಿಚ್ಚಿ ಬಿಡು,  ಎಲ್ಲ ಸೇರಿ ಹಾಕಿರೋ ಬೊ.. ಮಗನಿಗೆ, ಇನ್ನು ಮೇಲೆ ಇವನು ಇಂತಹ ಹಲ್ಕಾ ಕೆಲಸಕ್ಕೆ ಕೈ ಹಾಕಬಾರದು, ಹಾಗೆ ಮಾಡಿ'. ಗೋಪಾಲಣ್ಣನ ಮಾತು ಮುಗಿಯುವ ಮುಚೆಯೇ ನಾಲ್ಕೈದು ಬಲವಾದ ಏಟು ಬಿತ್ತು, ಬೆನ್ನಿಗೆ ಹೆಗಲಿಗೆ ಎಲ್ಲ ಕಡೆ. ನೋವಿನಿಂದ ಅನಂತಣ್ಣ ಕೂಗಲು ಶುರುಮಾಡಿದರು. ನಾನು ಗಾಡಿಯ ಹಿಂದೆ ಹೋಗಿ ಕಟ್ಟಿದ ದನಗಳನ್ನು ಬಿಚ್ಚಲು ಹೋದೆ. ಒಂದನ್ನೆಲ್ಲೋ ನೋಡಿದ ನೆನಪಾಯಿತು, ನಮ್ಮ ಮನೆಯದ್ದೆ ಅನಿಸಿತು. ನಾನು ಕೊಟ್ಟಿಗೆಗೆ ಹೋಗುವುದೇ ಅಪರೂಪ, ಹಾಗಾಗಿ ನಮ್ಮ ದನದ ಪರಿಚಯವೇ ಸರಿಯಾಗಿರಲಿಲ್ಲ. ಗೋಪಾಲಣ್ಣ ಹೇಳಿದ ಹಾಗೆ ನಮ್ಮ ಮನೆಯ ದನವನ್ನೂ ಕದ್ದು ಬಂದಿರುವನೆ ಅನಿಸಿತು. ಕೈಯಲ್ಲಿದ್ದ ಹಾಕಿ ದಾಂಡು ಇದು ತನಕ ಸುಮ್ಮನಿತ್ತು. ಮೊದಲ ಬಾರಿ ಹಾಕಿ ದಾಂಡು ಕೈಯಲ್ಲಿ ಸೇರಿದ್ದ ಉಳಿದವರೆಲ್ಲ ಮನಸಾರೆ ಎತ್ತಿ ಅದರ ಆನಂದ ಪಡೆಯುತ್ತಿದ್ದರು. ಅದನ್ನು ಕೈಯಲ್ಲಿ ಹಿಡಿದಾಗಲೇ ಏನೋ ವಿಚಿತ್ರ ಅನುಭೂತಿಯಾಗಿತ್ತು. ಲೋಕದ ತಪ್ಪನ್ನೆಲ್ಲ ತಿದ್ದುವ ಸಾಮರ್ಥ್ಯ ನಮಗೆ ಮಾತ್ರ ಇದೆ ಅನ್ನುವ ಅಹಂ. ಗಾಡಿಯ ಹಿಂದುಗಡೆ ದನಗಳನ್ನು ನೋಡಿದ ಮೇಲೆ ನನಗೂ ತಡೆಯಲಾಗಲಿಲ್ಲ, ಅನಂತಣ್ಣ ನೋವಿನ  ಕೂಗು ನನ್ನ ಕಿವಿಯಿಂದ ಮರೆಯಾಯಿತು. ಆ ನೋವು ನನ್ನ ಮನಸ್ಸಿಗೆ ವಿಕೃತ ಆನಂದ ನೀಡತೊಡಗಿತು. ಹಾಕಿ ದಾಂಡು ಮೇಲೆತ್ತಿ ಬಲವಾಗಿ ಅನಂತಣ್ಣನ ಭುಜಕ್ಕೆ ಒಂದೇಟು ಹಾಕಿದೆ. ಅದಾಗಲೇ ಮೂರು ಜನರ ಹಾಕಿ ದಾಂಡು ಸಹ ಮೇಲೆ ಹೋಗಿತ್ತು. ಭುಜಕ್ಕೆ ಬಿದ್ದ ಏಟಿಗೆ ಅನಂತಣ್ಣ ಒಂದು ಬದಿಗೆ  ಕುಸಿದರು. ಉಳಿದವರು ಅದನ್ನು ನಿರೀಕ್ಷಿಸಿರಲಿಲ್ಲ ಅನಿಸುತ್ತೆ, ಸಮಯ ಮೀರಿತ್ತು. ಮೂರು ಬಲವಾದ ಏಟುಗಳು ಅವರ ತಲೆಯ ಮೇಲೆಯೇ ಬಿತ್ತು.


ರಕ್ತ ಚಿಲ್ಲನೆ ಚಿಮ್ಮಿತು, ಅನಂತಣ್ಣನ ತಲೆಯಿಂದ. ಎಲ್ಲರಿಗೂ ಒಮ್ಮೇಲೆ ಗಾಬರಿಯಾಯಿತು. ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ, ಗೋಪಾಲಣ್ಣನು ಗಾಬರಿ ಬಿದ್ದರು. ನಾಲ್ಕೇಟು ಹಾಕಿ ಹೋಗುವುದು ಮಾತ್ರ ನಮ್ಮ ಯೋಜನೆಯಾಗಿತ್ತು, ಈಗ ನೋಡಿದರೆ ಅವರ ತಲೆಯಲ್ಲಿ ರಕ್ತ ಸುರಿಯುತ್ತಿದೆ. ಅವರನ್ನು ಆಸ್ಪತ್ರೆಗೆ ಸೇರಿಸಿದರೆ ಪೋಲಿಸ್ ಕೇಸಾಗುವುದು ಗ್ಯಾರಂಟಿ. ಬೇಡದ ಉಸಾಬರಿ ಎನಿಸಿತು. ಎಲ್ಲರ ಮುಖ ಹೆದರಿಕೆಯಿಂದ ಬಿಳಿಚಾಗಿತ್ತು, ಏನು ಮಾಡುವುದೆಂದು ಯಾರಿಗೂ ತೋಚಲಿಲ್ಲ. ಗೋಪಾಲಣ್ಣನೆ ಬೇಗ ವಾಸ್ತವಕ್ಕೆ ಬಂದರು. ಚಾಲಕನನ್ನು ಕರೆದು ಬೇಗನೆ ಅನಂತಣ್ಣನನು ಆಸ್ಪತ್ರೆಗೆ ಕೊಂಡೊಯ್ಯಲು ಹೇಳಿದರು. ಯಾರ ಹತ್ತಿರವಾದರೂ ನಮ್ಮ ವಿಷಯ ಬಾಯಿ ಬಿಟ್ಟರೆ ನಿನಗೂ ಇದೆ ಗತಿ ಎಂದು ಎಚ್ಚರಿಸಿಯೇ ಕಳಿಸಿದರು. ಎಲ್ಲ ತಡ ಮಾಡದೆ ವ್ಯಾನ್ ನಲ್ಲಿ ಕುಳಿತು ವಾಪಸ್ ತೆರಳಿದೆವು.


ವಾಪಸ್ ಗ್ಯಾರೇಜಿಗೆ ಬಂದರೂ ಕೂಡ ತಲೆ ಎಲ್ಲ ಮಧ್ಯಾಹ್ನದ ಘಟನೆಯ ಮೇಲೆಯೇ ಇತ್ತು. ಉಳಿದ ಹುಡುಗರ ಹತ್ತಿರ ಏನೂ ಬಾಯಿ ಬಿಟ್ಟಿರಲಿಲ್ಲ. ಮನದಲ್ಲೆಲ್ಲ ಭಯ ಆವರಿಸಿಕೊಂಡಿತ್ತು. ಎಲ್ಲಾದರೂ ಅನಂತಣ್ಣ ಪೊಲೀಸರಲ್ಲಿ ಬಾಯಿ ಬಿಟ್ಟರೆ ಗತಿ ಏನು ಎಂದು. ಅಮ್ಮನಿಗೆ ಗೊತ್ತಾದರೆ ಮನೆಯಿಂದಲೇ ಓಡಿಸಿಯಾರು. ದೇವರೇ, ಯಾರಿಗೂ ಗೊತ್ತಾಗದಿರಲಿ ಗೊತ್ತಾಗದಿರಲಿ ಎಂದು ಮಧ್ಯಾಹ್ನವೆಲ್ಲ ಪ್ರಾರ್ಥಿಸುತ್ತ ಕುಳಿತೆ. ಸಂಜೆ ಮನೆಗೆ ಹೋಗುವ ಮುಂಚೆ ಒಮ್ಮೆ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಹೋದೆ.  


ಮನೆ ಹತ್ತಿರ ಬರುತ್ತಿದಂತೆಯೇ ಅಮ್ಮನ ಸ್ವರ ಜೋರಾಗಿ ಕೇಳಿಸುತ್ತಿತ್ತು. ಅಮ್ಮ ಅಷ್ಟು ಕೋಪದಲ್ಲಿ ಇದ್ದದ್ದನ್ನು ಮುಂಚೆ ನೋಡಿರಲಿಲ್ಲ. ಮಧ್ಯಾಹ್ನ ಬಿಡಿಸಿದ ಅದೇ ದನ ಪಕ್ಕದಲ್ಲಿದ್ದ ಮರದ ಕಟ್ಟೆಯ ಹತ್ತಿರ ಸುತ್ತುತ್ತಿತ್ತು. 'ಬೋ.. ಮಕ್ಕಳು, ಅನ್ಯಾಯವಾಗಿ ದೇವರಂತ ಮನುಷ್ಯನನ್ನು ಕೊಂದು ಹಾಕಿದರು, ತಲೆಗೆ ಬಿದ್ದ ಪೆಟ್ಟಿಗೆ ಆಸ್ಪತ್ರೆಗೆ ಹೋಗುವ ಮೊದಲೇ ಪ್ರಾಣ ಹೋಗಿತ್ತಂತೆ. ಬೆಳಿಗ್ಗೆಯಷ್ಟೇ ಅರ್ಧ ಘಂಟೆ ನನ್ನ ಹತ್ತಿರ ಸುಖ ಕಷ್ಟ ಮಾತಾಡಿದ್ದರು. ನಿಮಗೆ ಗೊತ್ತಲ್ಲ, ಈ ಗೊಡ್ಡು ದನ ಮೂರು ವರ್ಷದಿಂದ ಕರು ಹಾಕಿರಲಿಲ್ಲ, ನಾನಾದರೂ ಎಷ್ಟು ದಿನ ಅಂತ ಇದರ ಚಾಕರಿ ಮಾಡುವುದು, ಹಾಗಾಗಿ ತಗೊಂಡು ಯಾರಿಗಾದರೂ ಕೊಡಿ ಅಂತ ಅನಂತಯ್ಯನ ಹತ್ತಿರ ಹೇಳಿದ್ದೆ. ಬೇಡ ಬೇಡ ಅಂದರೂ  ಗೊಡ್ಡು ದನಕ್ಕೆ ಇನ್ನೂರು ರುಪಾಯಿ ಕೊಟ್ಟಿದ್ದರು. ಈಗ ಈ ದನ ಸಹ ವಾಪಾಸು ಬಂದಿದೆ. ಅಯ್ಯನ ಹತ್ತಿರ ಹಣವೂ ತಗೊಂಡು ದನವನ್ನು ಕೊಡದಿದ್ದರೆ ಪಾಪ ತಟ್ಟದೆ ಇರುತ್ತದ ನನಗೆ' ಪಕ್ಕದ ಮನೆಯ ಗುಬ್ಬಕ್ಕನಲ್ಲಿ ಅಮ್ಮ ಅವಳ ಗೋಳು ಹೇಳಿಕೊಳ್ಳುತ್ತಿದ್ದಳು. 'ಬೆಳಿಗ್ಗೆ ಸೌದೆಗೆ ಹೋದಾಗ ಎರಡು ಕಾರಲ್ಲಿ ಸ್ವಲ್ಪ ಜನ ಬಂದು ಏರು ರಸ್ತೆ ಹತ್ತಿರ ಕಲ್ಲು ಹಾಕುವುದು ನೋಡಿದೆ, ಗ್ಯಾರೇಜ್ ಗೋಪಾಲನ ನೋಡಿದ ಹಾಗಾಯಿತು, ನನಗೂ ಸರಿಯಾಗಿ ಕಣ್ಣು ತೋರುವುದಿಲ್ಲ' ಗುಬ್ಬಕ್ಕ ಏನೋ ಜ್ಞಾಪಿಸಿಕೊಂಡು ಹೇಳಿದಳು. ಅಮ್ಮನಿಗೆ ಕೂಡಲೇ ಏನೋ ಹೊಳೆದಂತಾಯಿತು. 'ಆ ಬೋ..ಮಗನೆ ಹೊಡೆದು ಹಾಕಿದ್ದರೂ ಇರಬಹುದು, ಇತ್ತೀಚೆಗಂತೂ ಅವನ ಕಾಲು ಭೂಮಿ ಮೇಲೆ ನಿಲ್ಲುತ್ತಾನೆ ಇಲ್ಲ. ಅನಂತಯ್ಯನೆ  ಹೇಳುತ್ತಿದ್ದರು. ಹೋದ ವಾರ ಗೋಪಾಲನ ಅಮ್ಮ ಬರಲು ಹೇಳಿದ್ದರಂತೆ, ಅವರ ಮನೆಯ ಗುಡ್ಡವನ್ನು ತೆಗೆದುಕೊಂಡು ಹೋಗಲು. ನಿಮಗೆ ಗೊತ್ತಲ್ಲ, ಉಳಿದವರ ಹಾಗೆ ಅನಂತಯ್ಯ ಹಾಗೆಲ್ಲ ಗೋವುಗಳನ್ನು ಮಾಂಸದ ಅಂಗಡಿಗೆ ಹಣಕ್ಕಾಗಿ ಮಾರುವರಲ್ಲ. ಎಲ್ಲೋ ದೂರ ತೆಗೆದುಕೊಂಡು ಹೋಗಿ ಆ ಕಡೆ ಸಾಕುವವರಿಗೆ ಕೊಡುತ್ತಾರಂತೆ. ಹಾಗಾಗಿ ಹಾಲು ಕೊಡುವ ದನಗಳಿಗೆ ಮಾತ್ರ ಅವರು ಹಣ ಕೊಡುವುದು. ಆದರೆ ಈ ಗೋಪಾಲ ಹಣ ಕೊಟ್ಟು ತಗೊಂಡು ಹೋಗು ಅಂತ ಗಲಾಟೆ ಶುರು ಮಾಡಿ ಹೊಡೆಯಲು ಹೋಗಿದ್ದನಂತೆ. ಸುಮ್ಮನೆ ಗಾಡಿ ಬಾಡಿಗೆ ಹಾಳಾದ್ದು ನೋಡಿ ಸಿಟ್ಟಲ್ಲಿ ಇವರು ಕೂಡ ಸರಿಯಾಗಿ ಮಂಗಳಾರತಿ ಮಾಡಿ ಬಂದಿದ್ದರಂತೆ. ಅದೇ ಹಟದಲ್ಲಿ ಹೊಡೆಸಿ ಕೊಂದಿರಲೂ ಬಹುದು, ಈ ಗೋಪಾಲ ಅದಕ್ಕೆಲ್ಲ ರೆಡಿಯಾದವನೇ. ನಾಯಿಯಾಗಿ ಹುಟ್ಟುತ್ತಾನೆ ಇನ್ನೊಂದು ಜನ್ಮದಲ್ಲಿ, ಬೋ..ಮಗ'.


ಅಮ್ಮನ ಕೋಪ ಇಳಿಯುತ್ತಲೇ ಇರಲಿಲ್ಲ, ನಾನು ಒಳ ಹೋಗುವುದು ನೋಡಿದರು 'ಇವನು ಸಹ ಯಾವಾಗಲೂ ಅವರೊಟ್ಟಿಗೆ ಇರುತ್ತಾನೆ, ಸಾವಿರ ಸಲ ಹೇಳುತ್ತೇನೆ, ಅವರ ಹತ್ತಿರ ಎಲ್ಲ ಸೇರಬೇಡ. ಕೆಲಸ ಬಿಟ್ಟು ಸೀದಾ ಮನೆಗೆ ಬಾ ಅಂದು. ಕೇಳಬೇಕಲ್ಲ ಮೀಸೆ ಬಂದ ಮೇಲೆ ನಮ್ಮ ಮಾತನ್ನು. ಒಂದು ದಿನ ಬೇರೆ ಯಾರೋ ಬಂದು ನಾಯಿಯ ಹಾಗೆ ಹೊಡೆದು ರಸ್ತೆ ಬದಿ ಹಾಕುತ್ತಾರೆ, ಆವಾಗ ಮಾತ್ರ ಇವಕ್ಕೆಲ್ಲ ಬುಧ್ಧಿ ಬರುವುದು. ಬ್ರಾಹ್ಮಣರ ಶಾಪ ಯಾರಿಗೂ ತಟ್ಟದೆ ಇರುವುದಿಲ್ಲ. ನೋಡುತ್ತಾ ಇರಿ, ಈ ಗೋಪಾಲ ಸಹ ನಿಮ್ಮ ಕಣ್ಣೆದುರೇ ಮಾಡಿದ್ದನ್ನೆಲಾ ಅನುಭವಿಸುತ್ತಾನ ಇಲ್ಲವ ಎಂದು. ಇವತ್ತೀಗ ದುಡ್ಡು ಕೊಟ್ಟು ಆ ಪೋಲೀಸರ ಬಾಯಿ ಮುಚ್ಚಬಹುದು, ಆ ದೇವರ ಬಾಯಿ ಹೇಗೆ ಮುಚ್ಚುತ್ತಾರೆ ನಾನೂ ನೋಡುತ್ತೇನೆ'. ಅಮ್ಮನ ಕೋಪ ನಿಲ್ಲುವ ಸೂಚನೆ ಇರಲಿಲ್ಲ. ಸುಮ್ಮನೆ ಪ್ರತಿಕ್ರಿಯಸದೆ ಒಳ ನಡೆದೇ. ಅನಂತಣ್ಣ ಸತ್ತದ್ದಕ್ಕೆ ದುಃಖವಾಯಿತೋ, ಇಲ್ಲ ನಮ್ಮ ವಿಷಯ ಹೊರಬಂದಿಲ್ಲವೆಂದು ಖುಷಿಯಾಯಿತೋ ತಿಳಿಯಲಿಲ್ಲ.